?
ಎತ್ತುಗೆಗಾಗಿ, ಹುಬ್ಬಳ್ಳಿಯಿಂದ ಹೊರಬರುವ ಸಂಯುಕ್ತ ಕರ್ನಾಟಕದಲ್ಲಿ, ಬೆಂಗಳೂರಿನಿಂದ ಹೊರಬರುವ ಪ್ರಜಾವಾಣಿ ಇಲ್ಲವೇ ವಿಜಯಕರ್ನಾಟಕದಲ್ಲಿ, ಮತ್ತು ಉಡುಪಿಯಿಂದ ಹೊರಬರುವ ಉದಯವಾಣಿಯಲ್ಲಿ ಹೆಚ್ಚು ಕಡಿಮೆ ಒಂದೇ ಬಗೆಯ ಕನ್ನಡ ಬಳಕೆಯಾಗುತ್ತದೆ.
ಈ ಊರುಗಳಲ್ಲಿ ಜನರು ಬೇರೆ ಬೇರೆ ಬಗೆಯ ಆಡುನುಡಿಗಳನ್ನು ಬಳಸುವುದಿದ್ದರೂ ಸುದ್ದಿಹಾಳೆಗಳಲ್ಲಿ ಬರೆಯುವವರು ಹೆಚ್ಚು ಕಡಿಮೆ ಒಂದೇ ಬಗೆಯ ಕನ್ನಡವನ್ನು ಬಳಸುತ್ತಾರೆ. ಎತ್ತುಗೆಗಾಗಿ, ಹುಬ್ಬಳ್ಳಿಯ ಆಡುನುಡಿಯಲ್ಲಿ ಪದಗಳ ಕೊನೆಯ ಎಕಾರ ಅಕಾರವಾಗಿ ಕಾಣಿಸಿಕೊಳ್ಳುತ್ತದೆ (ಮನೆ>ಮನಿ, ಎಲೆ>ಯಲಿ, ಕಾಗೆ>ಕಾಗಿ, ಬರೆ>ಬರಿ, ಕೊಳೆ>ಕ್ವಳಿ). ಆದರೆ, ಸಂಯುಕ್ತ ಕರ್ನಾಟಕದಲ್ಲಿ ಬರೆಯುವವರು ಸಾಮನ್ಯವಾಗಿ ಪದಗಳ ಕೊನೆಯ ಎಕಾರವನ್ನು ಇಕಾರವಾಗಿ ಬದಲಾಯಿಸದೆ ಹಾಗೆಯೇ ಉಳಿಸಿಕೊಳ್ಳುತ್ತಾರೆ. ಬೆಂಗಳೂರಿನ ಹಲವರ ಆಡುನುಡಿಯಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗುತ್ತದೆ (ಹಣೆ>ಅಣೆ, ಹಾಲು>ಆಲು, ಹುಲಿ>ಉಲಿ, ಹೋಗು>ವಾಗು). ಆದರೆ, ಪ್ರಜಾವಾಣಿ ಇಲ್ಲವೇ ವಿಜಯಕರ್ನಾಟಕದಲ್ಲಿ ಬರೆಯುವವರು ಈ ಹಕಾರವನ್ನು ಹೆಚ್ಚಿನೆಡೆಗಳಲ್ಲೂ ಉಳಿಸಿಕೊಳ್ಳುತ್ತಾರೆ. ಕರಾವಳಿಯ ಕನ್ನಡದ ಆಡುನುಡಿಗಳೂ ಹಲವು ವಿಶಯಗಳಲ್ಲಿ ಒಳನಾಡಿನ ಆಡುನುಡಿಗಳಿಂದ ಬೇರಾಗಿವೆ; ಆದರೆ, ಉದಯವಾಣಿಯಲ್ಲಿ ಬರೆಯುವವರು ಹೆಚ್ಚಿನ ಮಟ್ಟಿಗೆ ಬೇರೆ ಸುದ್ದಿಹಾಳೆಗಳಲ್ಲಿ ಬಳಕೆಯಾಗುವಂತಹ ಒಳನುಡಿಯನ್ನೇ ಬಳಸಹೋಗುತ್ತಾರೆ.
ಸುದ್ದಿಹಾಳೆಗಳಲ್ಲಿ ಮಾತ್ರವಲ್ಲದೆ, ಬೇರೆ ಹಲವು ಬಗೆಯ ಬರಹಗಳಲ್ಲೂ ಇದೇ ಒಳನುಡಿ ಬಳಕೆಯಾಗುತ್ತದೆ: ಕತೆ-ಕಾದಂಬರಿಗಳಲ್ಲಿ ಹೆಚ್ಚಿನೆಡೆಗಳಲ್ಲೂ ಈ ಒಳನುಡಿ ಬಳಕೆಯಾಗುತ್ತದೆ; ಸೂಳುನುಡಿಗಳು (ಸಂಬಾಶಣೆಗಳು) ಬರುವಲ್ಲಿ ಮಾತ್ರ ಕೆಲವರು ಅವು ಆಡುನುಡಿಯಲ್ಲಿವೆ ಎಂಬ ಅನಿಸಿಕೆ ಬರುವ ಹಾಗೆ, ಅವುಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾರೆ. ಬೇರೆ ಹಲವು ಬಗೆಯ ಬರಹಗಳಲ್ಲೂ ಈ ಒಳನುಡಿಯ ಬಳಕೆಯನ್ನು ಕಾಣಬಹುದು. ಇದಲ್ಲದೆ, ಶಾಲೆಗಳಲ್ಲಿ ಮಕ್ಕಳಿಗೆ ಓದಲು ಮತ್ತು ಬರೆಯಲು ಇದೇ ಒಳನುಡಿಯನ್ನು ಕಲಿಸುತ್ತಾರೆ, ಮತ್ತು ಅವರ ಕಲಿಕೆಯ ಪುಸ್ತಕಗಳಲ್ಲಿ ಅದನ್ನೇ ಬಳಸುತ್ತಾರೆ.
ಹೀಗೆ, ಕರ್ನಾಟಕದಲ್ಲಿ ಎಲ್ಲರೂ ಓದಲು-ಬರೆಯಲು ಕಲಿಯುವ, ಮತ್ತು ತಮ್ಮ ಬರಹಗಳಲ್ಲಿ ಬಳಸಲು ಕಲಿಯುವ ಈ ಒಳನುಡಿಯನ್ನು ಇಲ್ಲಿ "ಎಲ್ಲರಕನ್ನಡ" ಎಂಬುದಾಗಿ ಹೆಸರಿಸಲಾಗಿದೆ. ಬರಹಗಳಲ್ಲಿ ಮಾತ್ರವಲ್ಲದೆ ಮಾತಿನಲ್ಲಿಯೂ ಈ ಒಳನುಡಿಯ ಬಳಕೆಯನ್ನು ಕಾಣಬಹುದು. ಎತ್ತುಗೆಗಾಗಿ, ಹವ್ಯಕ, ಹಾಲಕ್ಕಿ, ಗವ್ಡ ಮೊದಲಾದ ಆಡುನುಡಿಗಳನ್ನು ಮತ್ತು ತುಳು, ಕೊಂಕಣಿ, ಮರಾಟಿ ಮೊದಲಾದ ಬೇರೆ ಕೆಲವು ನುಡಿಗಳನ್ನು ಬಳಸುವ ಕರಾವಳಿಯ ಜನರು, ತಮ್ಮದಲ್ಲದ ನುಡಿ ಇಲ್ಲವೇ ಆಡುನುಡಿಗಳನ್ನು ಆಡುವವರೊಂದಿಗೆ ಮಾತನಾಡುವಾಗ, ಸಾಮಾನ್ಯವಾಗಿ ಈ ಎಲ್ಲರಕನ್ನಡವನ್ನೇ ಬಳಸುತ್ತಾರೆ. ಬೇರೆ ಕಡೆಗಳಲ್ಲೂ ಹಲವು ಸಂದರ್ಬಗಳಲ್ಲಿ (ತರಗತಿಗಳಲ್ಲಿ ಮತ್ತು ಸಬೆ-ಸಮಾರಂಬಗಳಲ್ಲಿ) ಆಡುನುಡಿಯ ಬದಲು ಈ ಎಲ್ಲರಕನ್ನಡವನ್ನೇ ಬಳಸಬೇಕಾಗುತ್ತದೆ.
ಆದರೆ, ಮಾತಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು, ಅವು ಮಾತಿನಲ್ಲಿ ಬಳಕೆಯಾಗುವ ಎಲ್ಲರಕನ್ನಡದಲ್ಲೂ ಕಾಣಿಸಿಕೊಳ್ಳುತ್ತವೆ. ಎತ್ತುಗೆಗಾಗಿ, ಬರಹದಲ್ಲಿ ಬರುವ ಕೆಲವು ತೆರೆಯುಲಿ(ಸ್ವರ)ಗಳು ಮಾತಿನಲ್ಲಿ ಬಿದ್ದುಹೋಗುತ್ತವೆ: ಹೋಗುತ್ತೀರೋ ಎಂಬುದು ಮಾತಿನಲ್ಲಿ ಹೋಗ್ತೀರೋ ಎಂದಾಗುತ್ತದೆ. ಬರಹದಲ್ಲಿ ಬರುವ ಕೇಳ್ವಿ (?), ಕೊನೆ (.), ತಡೆ (,), ಅರೆಕೊನೆ (;) ಮೊದಲಾದ ಗುರುತುಗಳು ಮಾತಿನಲ್ಲಿ ಉಲಿಯ ಏರಿಳಿತ, ಬಿಡುವು ಮೊದಲಾದವುಗಳಾಗಿ ಕಾಣಿಸಿಕೊಳ್ಳುತ್ತವೆ.
ಇದಲ್ಲದೆ, ಮಾತಿನಲ್ಲಿ ಸೊಲ್ಲುಗಳು ಇಡಿಯಿಡಿಯಾಗಿ ಬರುವುದಕ್ಕಿಂತಲೂ ತುಂಡು ತುಂಡಾಗಿ ಬರುವುದೇ ಹೆಚ್ಚು. ಆದರೆ ಬರೆಯುವಾಗ ಅವೆಲ್ಲ ಇಡಿಯಿಡಿಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಮಾತಿನಲ್ಲಿ ಬರುವ ಸೊಲ್ಲುಗಳಲ್ಲಿ ತಪ್ಪುಗಳಿರುವುದು ಹೆಚ್ಚು; ಆದರೆ ಬರಹದಲ್ಲಿ ತಪ್ಪುಗಳು ಬಾರದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಮಾತಿನಲ್ಲಿ ಬರುವ ಸೊಲ್ಲುಗಳು ಚಿಕ್ಕ ಚಿಕ್ಕವು; ದೊಡ್ಡವಾಗಿದ್ದರೂ ಅವು ಜೋಡಿಸಿದ ಸೊಲ್ಲುಗಳಾಗಿರುತ್ತವೆ. ಆದರೆ ಬರಹದಲ್ಲಿ ಹೆಚ್ಚಾಗಿ ಉದ್ದದ ಸೊಲ್ಲುಗಳು ಮತ್ತು ಒಳಸೊಲ್ಲುಗಳಿರುವಂತಹ ಸಿಕ್ಕಲು ಸೊಲ್ಲುಗಳು ಬರುತ್ತಿರುತ್ತವೆ. ಹಾಗಾಗಿ, ಇಲ್ಲಿ ಎಲ್ಲರಕನ್ನಡ ಎಂಬ ಹೆಸರನ್ನು ಮುಕ್ಯವಾಗಿ ಬರಹದಲ್ಲಿ ಬಳಕೆಯಾಗುವ ಒಳನುಡಿಯನ್ನು ಹೆಸರಿಸುವುದಕ್ಕಾಗಿ ಬಳಸಲಾಗಿದೆ.
© 2010 ellarakannada.org