ಬನವಾಸಿ ಬಳಗವು, ಕನ್ನಡ ಭಾಷಾಧ್ಯಯನ ವೇದಿಕೆಯೊಡಗೂಡಿ ಬೆಂಗಳೂರಿನ ರಾಷ್ಟ್ರೀಯ ನರರೋಗ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯ (ನಿಮ್ಹಾನ್ಸ್) ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ “ಎಲ್ಲರ ಕನ್ನಡ” ಓದುಕೂಟ – 2011 ಅತ್ಯಂತ ಯಶಸ್ವಿಯಾಗಿ ಜರುಗಿತು.
ಬನವಾಸಿ ಬಳಗದ ಶ್ರೀ ಕಿರಣ್ ಬಾ ರಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸಮಾಜದ ಏಳಿಗೆಯಲ್ಲಿ ನುಡಿ ಅಧ್ಯಯನದ ಮಹತ್ವವನ್ನು ತಿಳಿಸಿಕೊಟ್ಟರು. ಯಾವುದೇ ನಾಡಿನ ಏಳಿಗೆಗೆ ಆ ನಾಡಿನ ಜನರಲ್ಲಿನ ಕಲಿಕೆ ಮತ್ತು ದುಡಿಮೆಗಳು ಅತ್ಯುತ್ತಮವಾಗುವುದು ಅಗತ್ಯವಾಗಿರುವುದು ಜಗತ್ತು ಕಂಡುಕೊಂಡಿರುವ ಸತ್ಯ. ಅಂತೆಯೇ ಕನ್ನಡಿಗರ ಏಳಿಗೆಗೆ ಕನ್ನಡಿಗರ ಕಲಿಕಾ ವ್ಯವಸ್ಥೆ ಅತ್ಯುತ್ತಮವಾಗಬೇಕಾಗಿದೆ. ಇದರೊಟ್ಟಿಗೆ ಕನ್ನಡ ನುಡಿಯು ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಬಳಸಬಲ್ಲಷ್ಟು ಶಕ್ತವಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ನುಡಿಯ ವೈಜ್ಞಾನಿಕ ಅಧ್ಯಯನವು ಅತ್ಯಂತ ಮಹತ್ವಪೂರ್ಣವಾದದ್ದಾಗಿದೆ ಎಂಬ ನಿಲುವಿನ ಹಿನ್ನೆಲೆಯಲ್ಲಿ ಕನ್ನಡನಾಡಿನ ಭಾಷಾಧ್ಯಯನ ಕ್ಷೇತ್ರದಲ್ಲಿ ದುಡಿಯುವುತ್ತಿರುವವರನ್ನು ಒಂದೆಡೆ ಸೇರಿಸಿ ಸದರಿ ಕೆಲಸಕ್ಕೆ ವೇಗ ತಂದುಕೊಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.
ಸಮ್ಮೇಳನದಲ್ಲಿ ನಾಡಿನ ನಾನಾ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಭಾಷಾಧ್ಯಯನದ ವಿದ್ಯಾರ್ಥಿಗಳು ಪಾಲ್ಗೊಂಡರು. ಸಮ್ಮೇಳನಕ್ಕೆಂದೇ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ, ಕನ್ನಡ ಭಾಷಾಧ್ಯಯನಕ್ಕೆ ಸಂಬಂಧಿಸಿದಂತೆ ಪಟ್ಟಿಮಾಡಿದ ಹತ್ತು ವಿಷಯಗಳನ್ನು ಕುರಿತು ಪ್ರಬಂಧಗಳನ್ನು ಬರಮಾಡಿಕೊಳ್ಳಲಾಗಿತ್ತು. ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಮಂಡಿಸಲಾಯಿತು. ಉತ್ತಮವಾದ ಮೊದಲ ಮೂರು ಪ್ರಬಂಧಗಳಿಗೆ ಬಹುಮಾನ ನೀಡಲಾಯಿತು.
ಮೊದಲನೇ ಬಹುಮಾನ : ಕನ್ನಡ ನುಡಿಯ ಚರಿತ್ರೆ - ಶ್ರೀ. ಟಿ. ಮಂಜುನಾಥ್
ಎರಡನೇ ಬಹುಮಾನ : ಕನ್ನಡ ಧ್ವನಿ ರಚನೆ - ಶ್ರೀಯುತರಾದ ಡಾ|| ಬಿ ಎಸ್ ಸತ್ಯನಾರಾಯಣ
ಮೂರನೇ ಬಹುಮಾನ : ಕನ್ನಡ ಕಲಿಕೆ - ಕುಮಾರಿ ನೇತ್ರಾವತಿ
ನಾಡಿನ ಖ್ಯಾತ ಭಾಷಾವಿಜ್ಞಾನಿಗಳಾದ ನಾಡೋಜ ಡಾ|| ಡಿ ಎನ್ ಶಂಕರ್ ಭಟ್ ಹಾಗೂ ಡಾ|| ಕೆ ವಿ ನಾರಾಯಣ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಾ|| ಕೆ ವಿ ನಾರಾಯಣ ಅವರು ಉಪಸ್ಥಿತರಿದ್ದು ಸಮ್ಮೇಳನದಲ್ಲಿ ಭಾಗಿಯಾಗಿದ್ದವರಿಗೆ ಭಾಷಾಧ್ಯಯನ ನಡೆಸುವ ಬಗೆಯನ್ನು ವಿವರಿಸಿದರು. ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವು ಚುರುಕುಗೊಳ್ಳಲು ಅನುಕೂಲವಾಗುವಂತೆ ಯಾವ ಯಾವ ಕ್ಷೇತ್ರಗಳಲ್ಲಿ ಅಧ್ಯಯನವಾಗಬೇಕೆಂಬುದನ್ನು ಇಲ್ಲಿ ಚರ್ಚಿಸಲಾಯ್ತು.
ನಾಡಿನ ಹಿರಿಯ ಭಾಷಾವಿಜ್ಞಾನಿಗಳಾದ ಡಾ|| ಸಿ. ಎಸ್ ರಾಮಚಂದ್ರ, ಡಾ|| ಸಿ. ಪಿ. ನಾಗರಾಜ್, ಡಾ|| ಮಹೇಶ್ವರಯ್ಯ, ಡಾ|| ರಾಜೇಶ್ವರಿ ಮಹೇಶ್ವರಯ್ಯ, ಡಾ|| ಪಿ ಮಹದೇವಯ್ಯ, ಡಾ|| ಸುಬ್ಬುಕೃಷ್ಣ, ಡಾ|| ಅಶೋಕ್ ಕುಮಾರ್ ರಂಜೇರೆ, ಮೊದಲಾದವರು ಭಾಗವಹಿಸಿದ್ದರು. ನಾಳೆಯತ್ತ ಕನ್ನಡ ಕನ್ನಡಿಗ ಎನ್ನುವ ಘೋಷವಾಕ್ಯ ಹೊಂದಿದ್ದ ಈ ಸಮ್ಮೇಳನದಲ್ಲಿ ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡ ಭಾಷಾಧ್ಯಯನ ಕ್ಷೇತ್ರಕ್ಕೊಂದು ಹೊಸ ಮುನ್ನುಡಿಯನ್ನು ಬರೆಯಲಾಗಿದೆಯೆಂದು ಸಮ್ಮೇಳನದಲ್ಲಿ ಭಾಗವಹಿಸಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು. ಯಾವುದೇ ಅಂತರರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಮ್ಮೇಳನಗಳಿಗೆ/ ಸಿಂಪೋಸಿಯಂಗೆ ಸಾಟಿಯಾಗುವಂತೆ ಇಡೀ ಸಮ್ಮೇಳನವನ್ನು ಆಯೋಜಿಸಲಾಗಿತ್ತು ಎಂಬ ಅಭಿಪ್ರಾಯಗಳು ಸಮ್ಮೇಳನದಲ್ಲಿ ವ್ಯಕ್ತವಾದವು.
ಈ ಸಮ್ಮೇಳನದ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಮೂಡಿ ಬಂದ ವರದಿ, ಈ ಕೆಳಗೆ ನೋಡಬಹುದು.